ಹನೂರು: ಪಟ್ಟಣದ ಮಲೆ ಮಹದೇಶ್ವರ ಕ್ರೀಡಾಂಗಣದ ಸಮಗ್ರ ಅಭಿವೃದ್ಧಿಗೆ ಮತ್ತಷ್ಟು ವೇಗ ದೊರೆತಿದ್ದು, 5 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ನೂತನ ಬ್ಯಾಡ್ಮಿಂಟನ್ ಕೋರ್ಟ್ ಹಾಗೂ ಈಜುಕೊಳ ಕಾಮಗಾರಿಗಳಿಗೆ ಶಾಸಕ ಎಂ.ಆರ್. ಮಂಜುನಾಥ್ ಶಂಕುಸ್ಥಾಪನೆ ನೆರವೇರಿಸಿದರು.
ಕಾಮಗಾರಿಗೆ ಈಗಾಗಲೇ 3 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಕ್ಷೇತ್ರದ ಕ್ರೀಡಾ ಮೂಲಸೌಕರ್ಯ ಅಭಿವೃದ್ಧಿಗೆ ಇದು ಮಹತ್ವದ ಹೆಜ್ಜೆಯಾಗಿದೆ.
ಈ ವೇಳೆ ಮಾತನಾಡಿದ ಶಾಸಕ ಮಂಜುನಾಥ್, ಹನೂರು ಕ್ಷೇತ್ರದಲ್ಲಿ ಗ್ರಾಮೀಣ ಪ್ರತಿಭೆಗಳಿಗೆ ಸೂಕ್ತ ಮೂಲಸೌಕರ್ಯ ಕಲ್ಪಿಸಿ, ಯುವಕರು ಹಾಗೂ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ ಸೃಷ್ಟಿಸುವುದು ಉದ್ದೇಶ. ಸೂಕ್ತ ವೇದಿಕೆ ಮತ್ತು ತರಬೇತಿ ಸಿಕ್ಕಾಗ ಮಾತ್ರ ಕ್ರೀಡಾಪಟುಗಳು ತಮ್ಮ ಸಾಮರ್ಥ್ಯ ಬೆಳೆಸಿಕೊಳ್ಳಲು ಸಾಧ್ಯ ಎಂದರು.
ಮಲೆ ಮಹದೇಶ್ವರ ಕ್ರೀಡಾಂಗಣದಲ್ಲಿ ನಿರ್ಮಾಣವಾಗುವ ಈ ಸೌಲಭ್ಯ ಹನೂರು ಪಟ್ಟಣಕ್ಕೆ ಮಾತ್ರ ಸೀಮಿತವಲ್ಲ, ತಾಲೂಕಿನ ಎಲ್ಲಾ ಗ್ರಾಮಗಳ ಕ್ರೀಡಾಪಟುಗಳಿಗೆ, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದೆ. ಗ್ರಾಮೀಣ ಭಾಗದಲ್ಲಿ ಪ್ರತಿಭೆಗೆ ಕೊರತೆ ಇಲ್ಲ, ಆದರೆ ಸೌಲಭ್ಯದ ಕೊರತೆಯಿಂದ ಅನೇಕರು ಮುಂದೆ ಬರಲು ಸಾಧ್ಯವಾಗುತ್ತಿಲ್ಲ ಎಂದರು.
ಕ್ರೀಡೆ ದೈಹಿಕ ಸಾಮರ್ಥ್ಯದ ಜೊತೆಗೆ ಶಿಸ್ತು, ಆತ್ಮವಿಶ್ವಾಸ, ಸಮಯಪ್ರಜ್ಞೆ, ನಾಯಕತ್ವ ಗುಣ ಮತ್ತು ಆರೋಗ್ಯಕರ ಜೀವನಶೈಲಿ ಬೆಳೆಸುತ್ತದೆ. ಆದ್ದರಿಂದ ಶಿಕ್ಷಣದ ಜೊತೆಗೆ ಕ್ರೀಡೆಗೂ ಸಮಾನ ಆದ್ಯತೆ ನೀಡಬೇಕು. ಹನೂರಿನ ಕ್ರೀಡಾಪಟುಗಳು ತಾಲೂಕು-ಜಿಲ್ಲೆ ಮೀರಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುವಂತಹ ವಾತಾವರಣ ನಿರ್ಮಿಸುವುದು ತಮ್ಮ ಆಶಯ ಎಂದರು.
5 ಕೋಟಿ ವೆಚ್ಚದ ಕಾಮಗಾರಿಗೆ 3 ಕೋಟಿ ಬಿಡುಗಡೆಯಾಗಿರುವುದು ಕ್ರೀಡಾ ಕ್ಷೇತ್ರಕ್ಕೆ ದೊರೆತ ದೊಡ್ಡ ಉತ್ತೇಜನ. ಅನುದಾನವನ್ನು ಸಮರ್ಪಕವಾಗಿ ಬಳಸಿ ಗುಣಮಟ್ಟದಿಂದ ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ, ಕ್ರೀಡಾಂಗಣವನ್ನು ತಾಲೂಕಿನ ಪ್ರಮುಖ ಕ್ರೀಡಾ ಕೇಂದ್ರವನ್ನಾಗಿ ರೂಪಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ.ಪಂ ಮಾಜಿ ಉಪಾಧ್ಯಕ್ಷ ಆನಂದ್ ಕುಮಾರ್, ಮಾಜಿ ಜಿ.ಪಂ ಸದಸ್ಯ ಸಾಗ್ಯ ಬಾಬಣ್ಣ, ಚಾಮುಲ್ ನಿರ್ದೇಶಕ ಉದ್ದನೂರು ಪ್ರಸಾದ್, ಸಿಂಗಾನಲ್ಲೂರು ರಾಜಣ್ಣ, ಗುರುಸ್ವಾಮಿ, ಸಿದ್ದರಾಜು, ದೇವರಾಜು, ಇಂದುವಾಡಿ ಗೋವಿಂದ, ಕಿರಣ್ ಕುಮಾರ್, ಅಂಜುಂ ಪಾಷಾ, ನಟರಾಜು ಗೌಡ, ತಿರುಪತಿ, ಬಸವರಾಜು, ನಾಗಯ್ಯ, ಅಮೀನ್, ವೆಂಕಟೇಶ್ ಸೇರಿದಂತೆ ಸಾರ್ವಜನಿಕರು ಇದ್ದರು.
ವರದಿ ಕಾರ್ತಿಕ್ ಗೌಡ ಹನೂರು.

