ಅಕ್ರಮ ಪಡಿತರ ಅಕ್ಕಿ ಸಾಗಣೆ ಪ್ರಕರಣ: ಆಳಂದ ಸಿಪಿಐ ಸೇರಿ ನಾಲ್ವರು ಅಮಾನತು

Spread the love

ಕಲಬುರಗಿ: ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ವಾಹನವನ್ನು ಜಪ್ತಿ ಮಾಡಿದ ಬಳಿಕ ಪ್ರಕರಣ ದಾಖಲಿಸದೆ ಹಣ ಪಡೆದು ವಾಹನವನ್ನು ಬಿಟ್ಟು ಕಳುಹಿಸಿದ ಆರೋಪದ ಹಿನ್ನೆಲೆಯಲ್ಲಿ ಆಳಂದ ಸಿಪಿಐ ಸೇರಿದಂತೆ ನಾಲ್ವರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.

ಅಮಾನತುಗೊಂಡವರಲ್ಲಿ ಆಳಂದ ಸಿಪಿಐ ಹಾಗೂ ಮುಖ್ಯಮಂತ್ರಿ ಪದಕ ವಿಜೇತ ಶರಣಬಸಪ್ಪ ಕೋಡ್ತಾ, ಪೇದೆಗಳಾದ ಹಣಮಂತ, ಮಲ್ಲಿಕಾರ್ಜುನ ಹಾಗೂ ಸಾಯಬಣ್ಣ ಸೇರಿದ್ದಾರೆ.

ಕಳೆದ ಸೋಮವಾರ ಮಧ್ಯರಾತ್ರಿ 112ಕ್ಕೆ ಬಂದ ದೂರಿನ ಆಧಾರದ ಮೇಲೆ ಆಳಂದ ಪೊಲೀಸರು, ಆಳಂದ ಮಾರ್ಗವಾಗಿ ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಪಡೆದು ವಾಹನವನ್ನು ಜಪ್ತಿ ಮಾಡಿದ್ದರು. ಬಳಿಕ ವಾಹನವನ್ನು ಪೊಲೀಸ್ ಠಾಣೆಗೆ ತಂದಿದ್ದರೂ, ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವ ಬದಲು ₹11 ಲಕ್ಷಕ್ಕೆ ‘ಡೀಲ್’ ನಡೆಸಿ ವಾಹನವನ್ನು ಬಿಟ್ಟು ಕಳುಹಿಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು.

ಈ ಕುರಿತು ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾದ ಹಿನ್ನೆಲೆಯಲ್ಲಿ ಗೃಹ ಇಲಾಖೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಇಲಾಖಾ ಮಟ್ಟದಲ್ಲಿ ತನಿಖೆ ನಡೆಸಿದೆ. ತನಿಖೆಯ ವೇಳೆ ಕರ್ತವ್ಯ ಲೋಪ ಹಾಗೂ ಪ್ರಕರಣ ನಿರ್ವಹಣೆಯಲ್ಲಿ ನಿಯಮಬಾಹಿರ ನಡೆ ಕಂಡುಬಂದ ಹಿನ್ನೆಲೆಯಲ್ಲಿ ಸಿಪಿಐ ಸೇರಿದಂತೆ ನಾಲ್ವರು ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಕೈಗೊಂಡು ಅಮಾನತುಗೊಳಿಸಲಾಗಿದೆ.

ಮುಖ್ಯಮಂತ್ರಿ ಪದಕ ಪಡೆದಿದ್ದ ಆಳಂದ ಸಿಪಿಐ ಶರಣಬಸಪ್ಪ ಕೋಡ್ತಾ ಅವರ ವಿರುದ್ಧವೇ ಇಂತಹ ಗಂಭೀರ ಆರೋಪ ಕೇಳಿಬಂದು ಅಮಾನತು ಕ್ರಮಕ್ಕೆ ಒಳಗಾಗಿರುವುದು ಪೊಲೀಸ್ ಇಲಾಖೆಯಲ್ಲಿ ಗಮನ ಸೆಳೆದಿದೆ. ಅಲ್ಲದೆ, ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ತವರು ಜಿಲ್ಲೆಯಲ್ಲಿ ನಡೆದಿರುವ ಈ ಪ್ರಕರಣ ಪೊಲೀಸ್ ಇಲಾಖೆಯ ಕಾರ್ಯವೈಖರಿ ಬಗ್ಗೆಯೂ ಚರ್ಚೆಗೆ ಕಾರಣವಾಗಿದೆ.

ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಪಡಿತರ ಅಕ್ಕಿ ಜಪ್ತಿ ಮಾಡಿದ ನಂತರ ವಾಹನವನ್ನು ಬಿಟ್ಟು ಕಳುಹಿಸಿದ ಆರೋಪ ಹಾಗೂ ಹಣದ ವ್ಯವಹಾರದ ಕುರಿತು ಇಲಾಖಾ ತನಿಖೆ ನಡೆದಿದ್ದು, ತನಿಖೆಯ ಸಂಪೂರ್ಣ ವರದಿ ಬಳಿಕ ಪ್ರಕರಣದ ಇನ್ನಷ್ಟು ವಿವರಗಳು ಬಹಿರಂಗವಾಗುವ ನಿರೀಕ್ಷೆಯಿದೆ.

Leave a Reply

Your email address will not be published. Required fields are marked *