ತಾಲ್ಲೂಕು ಗ್ರಾಮಗಳಿಗೆ ಸಿಇಒ ಭುವನೇಶ್ ಪಾಟೀಲ್ ಭೇಟಿ: ನೀರು, ನೈರ್ಮಲ್ಯ, ಶಿಕ್ಷಣ ಮತ್ತು ಅಂಗನವಾಡಿ ಸೌಲಭ್ಯಗಳ ಸಮೀಕ್ಷೆ

Spread the love

ಹುಬ್ಬಳ್ಳಿ-ಧಾರವಾಡ: ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಭುವನೇಶ್ ಪಾಟೀಲ್ ಅವರು ಗುರುವಾರ ಕುಂದಗೋಳ ತಾಲ್ಲೂಕಿನ ಹಿರೇಹರಕುಣಿ, ಮುತ್ತಿಗಟ್ಟಿ, ಮತ್ತು ರಾಮನಕೊಪ್ಪ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು.
ಹಿರೇಹರಕುಣಿ ಮತ್ತು ಚಿಕ್ಕರಕುಣಿಯಲ್ಲಿ ಕುಡಿಯುವ ನೀರು ಹಾಗೂ ನೈರ್ಮಲ್ಯ ಪರಿಶೀಲನೆ
ಸಿಇಒ ಭುವನೇಶ್ ಪಾಟೀಲ್ ಅವರು ಮೊದಲು ಹಿರೇಹರಕುಣಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಅಡಿಯಲ್ಲಿ ಕೈಗೊಂಡಿರುವ ಶಾಲಾ ಅಭಿವೃದ್ಧಿ ಕಾಮಗಾರಿಗಳು ಹಾಗೂ ಜಲ ಜೀವನ್ ಮಿಷನ್ ಅಡಿಯಲ್ಲಿ ನಡೆಯುತ್ತಿರುವ ಕುಡಿಯುವ ನೀರಿನ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದರು.
ನಂತರ, ಅವರು ಚಿಕ್ಕರಕುಣಿ ಗ್ರಾಮಕ್ಕೆ ಭೇಟಿ ನೀಡಿ, ಅಲ್ಲಿನ ಶುದ್ಧ ಕುಡಿಯುವ ನೀರಿನ ಘಟಕವನ್ನು ಪರಿಶೀಲಿಸಿದರು. ಈ ವೇಳೆ, ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಯಡಿ ಮನೆಗಳಿಗೆ ಒದಗಿಸಲಾದ ನೀರಿನ ಕೊಳವೆ ಸಂಪರ್ಕಗಳ ಗುಣಮಟ್ಟ, ನೀರಿನ ಮೀಟರ್‌ಗಳ ಸ್ಥಾಪನೆ, ನೀರು ಸರಬರಾಜಿನ ಸ್ಥಿರತೆ, ಪೈಪ್‌ಲೈನ್ ಕಾಮಗಾರಿಯ ನಂತರ ರಸ್ತೆ ಪುನರ್‌ಸ್ಥಾಪನೆ, ಮತ್ತು ಫೀಲ್ಡ್ ಟೆಸ್ಟ್ ಕಿಟ್‌ಗಳ (FTK) ಮೂಲಕ ನೀರಿನ ಗುಣಮಟ್ಟ ಪರೀಕ್ಷೆ ಸೇರಿದಂತೆ ಹಲವು ಮಹತ್ವದ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಿದರು. ಜೊತೆಗೆ, ಗ್ರಾಮದಲ್ಲಿ ಗ್ರಾಮೀಣ ನೀರು ಮತ್ತು ಸ್ವಚ್ಛತಾ ಸಮಿತಿಗಳ (VWSC) ಕಾರ್ಯನಿರ್ವಹಣೆ ಮತ್ತು ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದ ವರದಿಗಳನ್ನೂ ಅವರು ಪರಿಶೀಲಿಸಿ, ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.
ಮುತ್ತಿಗಟ್ಟಿ ಶಾಲೆಯಲ್ಲಿ ಬಿಸಿಯೂಟ ಪರಿಶೀಲನೆ ಹಾಗೂ ಶಿಕ್ಷಣಕ್ಕೆ ಒತ್ತು
ಬಳಿಕ ಸಿಇಒ ಭುವನೇಶ್ ಪಾಟೀಲ್ ಅವರು ಮುತ್ತಿಗಟ್ಟಿ ಗ್ರಾಮದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗೆ ಭೇಟಿ ನೀಡಿದರು. ಅಲ್ಲಿ ಮಕ್ಕಳೊಂದಿಗೆ ಮಧ್ಯಾಹ್ನದ ಬಿಸಿಯೂಟ ಸವಿದು, ಊಟದ ಗುಣಮಟ್ಟ ಪರಿಶೀಲಿಸಿದರು. ಈ ಸಂದರ್ಭದಲ್ಲಿ, ಅಡುಗೆ ಸಿಬ್ಬಂದಿಗಳು ಸ್ವಚ್ಛತೆಯನ್ನು ಕಡ್ಡಾಯವಾಗಿ ಕಾಪಾಡಿಕೊಳ್ಳಬೇಕು ಮತ್ತು ಮಕ್ಕಳಿಗೆ ಸರಿಯಾದ, ಗುಣಮಟ್ಟದ ಆಹಾರವನ್ನು ತಯಾರಿಸಿ ಬಡಿಸಬೇಕು ಎಂದು ಸೂಚಿಸಿದರು. ಅಲ್ಲದೆ, ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬರುವಂತೆ ಶಿಕ್ಷಕರು ಶ್ರಮಿಸುವಂತೆ ಪ್ರೇರೇಪಿಸಿದರು.
ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಮೂಲಸೌಕರ್ಯ ಖಚಿತಪಡಿಸಿಕೊಂಡ ಸಿಇಒ
ಅದೇ ರೀತಿ, ಅವರು ಅಂಗನವಾಡಿ ಕೇಂದ್ರಗಳಿಗೂ (ಕೂಸಿನ ಮನೆ) ಭೇಟಿ ನೀಡಿ ಪರಿಶೀಲಿಸಿದರು. ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಅಗತ್ಯ ಮೂಲಸೌಕರ್ಯಗಳು ಲಭ್ಯವಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು. ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸುವ ಕುರಿತು ನಿಗಾ ವಹಿಸುವಂತೆ ಸೂಚಿಸಿದರು.
ಅಂಗನವಾಡಿ ಕೇಂದ್ರಗಳ ಒಳಾಂಗಣ ಮತ್ತು ಹೊರಾಂಗಣ ಆವರಣದ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಸಿಇಒ ಅವರು ನಿರ್ದೇಶಿಸಿದರು. ಬಾಲ್ಯದಲ್ಲಿಯೇ ಮಕ್ಕಳಿಗೆ ಶಿಸ್ತು ಮೂಡಲು ಸ್ವಚ್ಛತೆ ಹಾಗೂ ಶುಚಿತ್ವದ ಮಹತ್ವವನ್ನು ತಿಳಿಸುವುದು ಅಗತ್ಯವಾಗಿದೆ. ಹೆಚ್ಚು ಮಕ್ಕಳು ಕೇಂದ್ರಗಳಿಗೆ ಹಾಜರಾಗಲು ಪ್ರೇರೇಪಿಸಬೇಕು ಎಂದೂ ಅವರು ತಿಳಿಸಿದರು.
ಈ ಸಂದರ್ಭದಲ್ಲಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರ ಜಗದೀಶ್, ಕುಂದಗೋಳ ತಾಲ್ಲೂಕಿನ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್, ಕಮ್ಮಾರ ಸಹಾಯಕ ನಿರ್ದೇಶಕರು, ಅಭಿಯಂತರರು, ಶಿಕ್ಷಕರು, ಗ್ರಾಮ ಪಂಚಾಯಿತಿಯ ಚುನಾಯಿತ ಪ್ರತಿನಿಧಿಗಳು, ಪಿಡಿಒ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

ಪೋಟೋ: ಹುಬ್ಬಳ್ಳಿ- ಧಾರವಾಡ
ತಾಲ್ಲೂಕಿನ ಹಿರೇಹರಕುಣಿ ಗ್ರಾಮದಲ್ಲಿ ಕುಡಿಯುವ ನೀರಿನ ಘಟಕಗಳನ್ನು ಸೇರಿದಂತೆ ವಿವಿಧ ಕಾಮಗಾರಿಯನ್ನು ಜಿಲ್ಲಾ ಪಂಚಾಯತ ಸಿಇಒ ಭುವನೇಶ್ವರ ಪಾಟೀಲ ಪರಿಶೀಲಿಸಿದರು.

Leave a Reply

Your email address will not be published. Required fields are marked *